Sunday, May 4, 2008

ದೂರ ಸರಿದವಳು...

ಬರಡಾದ ಮನದಲ್ಲಿ ಬಾಂಧವ್ಯದ ಬೀಜ ಬಿತ್ತಿದವಳು ನೀನು
ಬರಿದಾದ ಹೃದಯದಲ್ಲಿ ಪ್ರೇಮದಲೆಯನೆಬ್ಬಿಸಿದವಳು ನೀನು
ಕಾರ್ಮೋಡ ಮುಸುಕಿದ್ದ ಬದುಕಿಗೆ ಬೆಳದಿಂಗಳ ಚಂದ್ರಮುಖಿ ನೀನು
ಬತ್ತಿ ಹೋಗಿದ್ದ ಆಸೆಗಳನ್ನೆಲ್ಲ ನೀರೆರೆದು ಪೋಷಿಸಿದವಳು ನೀನು
ನೊಂದ ಮನಸಿಗೆ ಸವಿ ಸಾಂತ್ವನದ ನುಡಿ ನೀನು
ಮಧುರ ನೆನಪನೆಲ್ಲ ಮರೆತು...
ನೀನಿಲ್ಲದ ಹೊರೆತು...
ಬದುಕು ಎಂದರೆ ಹೇಗೆ ಬದುಕಲಿ ನಾನು...?!
ಇದನ್ನೆಲ್ಲ ಮರೆತು ಹೇಗೆ ಬದುಕುವಿಯೇ ನೀನು...??!!

Thursday, March 6, 2008

ವಿದಾಯ

ಮರೆಯಲಾಗದ ನೆನಪುಗಳಾ ಸರಮಾಲೆಯಲ್ಲಿ
ಸೊರಗಿರುವ ಹೂವಿನಂತೆ ನಾನು
ಮರ ಹಬ್ಬಿದ ಹುಲುಸಾದ ಬಳ್ಳಿಯಲ್ಲಿ
ಘಮಘಮಿಸುವ ಮಲ್ಲಿಗೆ ನೀನು!

Wednesday, March 5, 2008

ಅನ್ವೇಷಣೆ

ಈ ಬೆಳದಿಂಗಳ ರಾತ್ರಿಯೆಲ್ಲಾ
ಚಂದ್ರಮನ ಕಾಂತಿಯೋ....
ಈ ಹೊಂಗನಸಿನ ಹಾದಿಯೆಲ್ಲಾ
ಎನ್ನ ಮನಸಿನ ಭ್ರಾಂತಿಯೋ....!!??

ಬಾಳ ಯಾನ

ಅವಳ ಭಾವದ ಬಲೆಯು
ಅವಳ ಪ್ರೇಮದ ಸೆಲೆಯು
ಅವಳ ನೆನಪಿನ ಅಲೆಯು
ಕೊಂಡೊಯ್ದುದೆನ್ನನು
ತಿರುಗಿ ಬಾರದ ತೀರಕೆ

ಪ್ರೇಮ ಬಂಧ

ಬರಿಯ ಜೀವನವಲ್ಲಬಾಳು ಸ್ನೇಹದ ಬೀಡು
ಬರಿಯ ಚೇತನವಲ್ಲಪ್ರೇಮ ಜೇನಿನ ಗೂಡು
ಬರೀ ಪ್ರೀತಿಯ ಸೊಗಡಲ್ಲಮನವು ಭಾಂದವ್ಯದ ಬೀಡು

ಬರೀ ಮೋಹದ ಸೆಲೆಯಲ್ಲಭವ್ಯ ಭಾವನೆಗಳ ಬೀಡು
ಬರೀ ಕಲ್ಪನೆಯ ಕಲೆಯಲ್ಲನಿತ್ಯ ಸತ್ಯದ ಪಾಡು
ಬರೀ ಭ್ರಮೆಯ ಮಾತಲ್ಲನಿತ್ಯ ಚೈತ್ರದ ಹಾಡು

ಪಿಸುಮಾತು

ಕಣ್ಣಂಚಲಿ ನೀ ‌ಅಂದು ಆಡಿದ ಆ ಪಿಸುಮಾತು
ಮೌನದ ಅಲೆಯ ಮೇಲೆ ತೇಲಿ ಬಂದ ಪಿಸುಮಾತು
ಮನದಾಳದಿ ಹುದುಗಿರುವ ನೂರೆಂಟು ಭಾವಗಳ
ಬಿಚ್ಚಿಡುವ ಹವಣಿಕೆಯ ಹೊಚ್ಚ ಹೊಸ ತನವು
ಸುಳಿಯಂಚಿನ ಹಿಂದಿರುವ ಕಣ್ಣಂಚಿನ ತುದಿಗಿರುವ
ಆ ನಿನ್ನ ಪಿಸುಮಾತು

ಹೃದಯ ಗಭ೯ದಲಿ ಅಡಗಿರುವ ಆಸೆ ಆಕಾಂಕ್ಷೆಗಳನೆಲ್ಲ
ಬೇರೊಂದು ಹೃದಯಕೆ ರವಾನಿಸುವ ಅಚ್ಚ ಅಪರೂಪದ ಮಾತು,
ಆ ನಿನ್ನ ಪಿಸುಮಾತು

ಮರೆಯಲಾಗದ ಮಾತು ಆ ನಿನ್ನ ಪಿಸುಮಾತು
ಮೌನದಲಿ ಅಡಗಿಹುದು ನೂರೆಂಟು ಅಥ೯
ಆದರೇನು ಮಾಡುವುದು ಅದನು ಅರಿಯುವುದೇ ಕಷ್ಟ
ಹಾಲ್ಗಡಲ ಅಡಿಯಲ್ಲಿ ಅಡಗಿ ಕುಳಿತಂತೆ
ಕಣ್ಣಂಚಲಿ ನೀ ಅಂದು ಆಡಿದ ಆ ಪಿಸುಮಾತು

ಎಷ್ಟು ಹಿತ ಆ ನಿನ್ನ ಮಾತು ಎಷ್ಟು ಮಿತ
ಆ ನಿನ್ನ ಮಾತು ಮಾತೆಂದರೆ ಮುತ್ತು ಮಾಣಿಕ್ಯ
ಕಣ್ಣಂಚಿನಲೇ ನೀ ಹೇಳಿದೆ ಸತ್ಯ