Wednesday, July 11, 2007

ಕಾಡುವ ನೆನಪು

ಕಾಡುತಿಹುದು ನಿನ್ನದೆ ನೆನಪು
ಬೇಡುತಿಹುದು ನಿನ್ನನೆ ಮನಸು
ನಿನ್ನ ಒಲುಮೆಯಿಂದಲೆ ಬಾಳು
ಬೆಳಕಾದಂತೆ ಕನಸು
ನಿನ್ನ ಸ್ನೇಹದಿಂದಲೆ ಬಾಳು
ಹಸನಾದಂತೆ ಕನಸು
ಮತ್ತೆ ಮತ್ತೆ ಕಾಡುವ ನೆನಪು
ಎಲ್ಲ ದೇವರ ಬೇಡಿದೆ ಮನಸು
ನಿನ್ನ ನಗುವಿನಿಂದಲೆ ಬದುಕು
ಸಿಹಿಯಾದಂತೆ ಕನಸು
ನಿನ್ನ ಪ್ರೇಮದಿಂದಲೆ ಬದುಕು
ಸಾರ್ಥಕವಾದಂತೆ ಕನಸು

Tuesday, March 20, 2007

ಆಶಯ

ಬಾಡಿದಾ ಮೊಗದಲ್ಲಿ
ಬತ್ತಿದಾ ಎದೆಯಲ್ಲಿ
ಜೀವ ಭಾವದ ಸೆಲೆಯ
ಮತ್ತೆ ಮೂಡಿಸುವಾಸೆ
ಕರಗಿದಾ ಕನಸನ್ನು
ಮುದುಡಿದಾ ಮನಸನ್ನು
ತಟ್ಟಿ ತೆರೆಯುವ ಆಸೆ
ಸೊರಗಿದಾ ಸೊಬಗನ್ನು
ಮರೆತಿರುವ ನೆನಪನ್ನು
ಕೆದಕಿ ತೆಗೆಯುವ ಆಸೆ
ಕತ್ತಲಲೆ ಕಳೆದಿರುವ
ನೆತ್ತರಲೆ ಬೆಳೆದಿರುವ
ಮುಗ್ಧ ಜೀವಿಗಳನೆಲ್ಲ
ಸಂತೈಸುವ ಆಸೆ
ದುಃಖ ತುಂಬಿದ ಬದುಕು
ದಿಕ್ಕು ಕಾಣದ ದೋಣಿ
ದಡವ ಸೆರಿಸುವ ಆಸೆ

Sunday, March 11, 2007

ಅಭ್ಯುದಯ

ಇರುಳು ಕಳೆದು
ಬೆಳಕು ಹರಿಯಲಿ
ಬಾಳ ಕತ್ತಲೆ ಕಳೆಯಲಿ
ನಿನ್ನ ನಗುವಿನ ಒಂದು ಕಿರಣದಿ
ಬದುಕು ಧನ್ಯತೆ ಪಡೆಯಲಿ
ಮೋಡ ಸರಿಯಲಿ ಬಾನು ಬೆಳಗಲಿ
ದೇವ ದರುಶನವಾಗಲಿ

ಶುಭ್ರ ಬದುಕಿಗೆ ನಾಂದಿಯಾಗಲಿ
ಭವ್ಯ ಭಾವನೆ ಬೆಳೆಯಲಿ
ಸ್ನಿಗ್ದ ಚೆಲುವಿನ ರೂಪ ಮೂಡಲಿ
ರಂಗಿನೋಕುಳಿ ಬೀರಲಿ
ತಂಪುಗಾಳಿಯು ಕಂಪು ಸೂಸುತ
ಧರೆಯ ಸ್ವರ್ಗವ ಮಾಡಲಿ
ಮನದ ಮೌಢ್ಯವ ತೊಳೆಯಲಿ


- ಲಕ್ಷ್ಮೀಶ ನಡಹಳ್ಳಿ
ಬೆಂಗಳೂರು

ಸಂದಿಗ್ಧ

ಭಾವಗಳು ನೂರುಂಟು
ಹೃದಯಾಂತರಾಳದಲ್ಲಿ ಭಾವಗಳು ನೂರುಂಟು
ಆದರೇಕೋ ಅವಕಿಲ್ಲ ಜೀವ
ಪ್ರೀತಿ ಹೃದಯವೇ ದೂರಾದ ಮೇಲೆ
ಅವಕೆಲ್ಲಿಂದ ಬಂದೀತು ಜೀವ


ನೋವುಗಳು ನೂರೆಂಟು
ಮನದಾಳದಲ್ಲಿ ನೋವುಗಳು ನೂರೆಂಟು
ಆದರೇಕೋ ಅವಕಿಲ್ಲ ಸಾವ
ನೋವುಗಳೆಲ್ಲ ಉಸಿರಲ್ಲೆ ಬೆರೆತಿರುವಾಗ
ಬಂದೀತಾದರು ಅವಕೆಲ್ಲಿಂದ ಸಾವ


- ಲಕ್ಷ್ಮೀಶ ನಡಹಳ್ಳಿ
ಬೆಂಗಳೂರು

Thursday, March 8, 2007

ಮಮತೆಯ ಮಡಿಲು

ಮರಿ ಹಕ್ಕಿ ರೆಕ್ಕೆ ಬಿಚ್ಚಿ
ಹಾರಿತ್ತು ಬಾನ ನೆಚ್ಚಿ
ಸಹಿಸೀತೆ ತುತ್ತನಿತ್ತು
ಸಲಹಿದಾ ತಾಯಿ ಹಕ್ಕಿ

ತಿರುಗಿತು ರೆಕ್ಕೆ ಬಡಿದು
ಬಾನಲ್ಲೆ ಗಿರಕಿ ಹೊಡೆದು
ಬಳಲಿತು ಪುಟ್ಟ ದೇಹ
ನೆನೆಸಿತು ತಾಯಿ ಮೋಹ

ಬಾಯಾರಿ ದೂರ ಅಲೆದು
ಹೊಳೆಯಲ್ಲಿ ನೀರ ಕುಡಿದು
ಕುಳಿತಿತ್ತು ಮರದ ಮೇಲೆ
ಮನದಲ್ಲಿ ನೆನಪ ಮಾಲೆ

ಏಕಾಂತದಾಸೆ ಬತ್ತಿ
ಗೂಡಿನಾ ನೆನಪು ಒತ್ತಿ
ಕಂಡಂತ ಕನಸು ನೂರು
ಕನಸೆಲ್ಲ ಚೂರು ಚೂರು

ಮರಳಿತು ತಾಯ ಅರಸಿ
ಕಂಬನಿಯ ಕೋಡಿ ಹರಿಸಿ
ಕುಳಿತಿತ್ತು ಅಳುತ ತಾಯಿ
ಮರಿಹಕ್ಕಿ ಬರುವ ಬಯಸಿ

- ಲಕ್ಷ್ಮೀಶ ನಡಹಳ್ಳಿ
ದಿ: ೦೬/೦೩/೨೦೦೭,
ಬೆಂಗಳೂರು